Tuesday, April 08, 2008

ಯುಗಾದಿಯ ಶುಭಾಶಯಗಳು

Most of the ideas here are cliched, but I could not resist this poem when I saw my little Biyadiya's face when he ate the bEvu-bella his Grandfather gave him.

ಹೊಸ ವರುಷದ ಹಬ್ಬದಂದು
ಪುಟ್ಟ ಚೆಂದದಿಂದ ಮಿಂದು
ತಂದೆಯಿತ್ತ ಬೇವು-ಬೆಲ್ಲ
"ಒಲ್ಲೆ" ಎಂದನು ||

"ನೈವೇದ್ಯದ ದ್ರಾಕ್ಷಿ ಮಧುರ
ಪಾಯಸವೋ ಮತ್ತು ಸಿಹಿಯು
ಬೆಲ್ಲವೊಂದು ಮೆಲ್ಲೆ ಸಾಕು
ಬೇವು ನನಗೆ ಬೇಡವು"

ಎಂಬ ಮಾತ ಕೇಳಿ ತಾಯಿ
ಮುದ್ದು ಮಗನ ಬಳಿಗೆ ಸಾರಿ
ಬುದ್ಧಿ ಪೇಳ್ವೆನೆಂದು ಬಗೆದು
ಪುಟ್ಟನಿಗಿಂತೆಂದಳು

"ಬೆಲ್ಲದ ಜೊತೆ ಬೇವನುಣುವ
ಅರ್ಥಪೂರ್ಣಸಂಪ್ರದಾಯ-
-ದರ್ಥವನ್ನು ತಿಳಿಯೊ ಮಗುವೆ
ಕೇಳು ನನ್ನ ಮಾತನು

ಬೇವಿನ ಕಹಿ ಬೆಲ್ಲದ ಸಿಹಿ
ಸೇರೆ ಮೈಗರೋಗತೆ
ನೋವಿನ ಕಹಿ ನಲಿವಿನ ಸಿಹಿ
ಸೇರೆ ನಮಗೆ ಪೂರ್ಣತೆ

ಸ್ವಾತಂತ್ರ್ಯದ ಸವಿಯ ಮುಂದೆ
ನಿಯಮ ಕಹಿಯೆನಿಸಿದರೂ
ಎರಡರ ಸಮತೋಲನವೇ
ರಕ್ಷೆ ನಮಗೆ ತಿಳಿ ಮಗು

ಬಿಸಿಲು ಬಹಳ ಹೆಚ್ಚಿದಾಗ
ಮಳೆಯು ಕೂಡ ಸುರಿವುದು
ಅಂತೆಯೆ ಸುಖ ಬೇಕೆಂಬಗೆ
ಕಷ್ಟವಂತು ತಪ್ಪದು

ಸ್ವಾನುಭವದ ಮೂಸೆಯಲ್ಲಿ
ಬೇವು-ಬೆಲ್ಲ ಕರಗಿಸೆ
ದೊರೆವುದೆಮ್ಮ ಮನಕೆ ಶಾಂತಿ
ಸಮಾಧಾನವೆಂದಿಗೂ"

ಮಗುವಿಗಮ್ಮನಂದ ಮಾತು
ನಮಗೆ ಕೂಡ ವಿಹಿತವು
ಬೇವು-ಬೆಲ್ಲ ಸೇರಿ ನಮ್ಮ
ಬದುಕಾಗಲಿ ಪೂರ್ಣವು ||

ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು !